ಎಮೆಟಿನ್-
ಇಪಿಕ್ಯಾಕುವಾನ ಸಸ್ಯದ ಒಣ ಬೇರಿನಿಂದ ತೆಗೆದ ಆಲ್ಕಲಾಯಿಡ್. ಈ ಸಸ್ಯ ಬ್ರೆಜಿûಲ್ ಮತ್ತು ಮಧ್ಯ ಅಮೆರಿಕ ಪ್ರದೇಶಗಳ ಮೂಲ ನಿವಾಸಿ. ಭಾರತದಲ್ಲಿ ಇದನ್ನು ಈಗ ಬೆಳೆಸುತ್ತಾರೆ. ಎಮೆಟಿನ್ ಅಸ್ಫಟಿಕ ರೂಪದ ಬಿಳಿ ಪುಡಿ. ಇದು ಆಲ್ಕೊಹಾಲ್ ಈಥರ್ ಮತ್ತು ಕ್ಲೋರೋಫಾರ್ಮುಗಳಲ್ಲಿ ಬಲು ಸುಲಭವಾಗಿ ಕರಗುತ್ತದೆ. ಇದರ ಕರಗುವ ಬಿಂದು 740 ಸೆಂ. ಗ್ರೇ. ಸಂಕೇತ ಅ29ಊ40ಔ4ಓ2. ಇದರ ಹೈಡ್ರೊಕ್ಲೋರೈಡ್ ಬಿಸಿನೀರಿನಲ್ಲಿ ಬಣ್ಣವಿಲ್ಲದ ಮಸಕಾದ ಸೂಜಿ ಆಕಾರದ ಹರಳುಗಳಾಗಿಯೂ ತಣ್ಣಗಿರುವ ಪರ್ಯಾಪ್ತ ದ್ರಾವಣದಿಂದ ದಪ್ಪವಾದ ಪಾರದರ್ಶಕ ಪ್ರಿಸ್ಮ್ ಹರಳುಗಳಾಗಿಯೂ ಬೇರ್ಪಡುತ್ತದೆ. ಅಲ್ಪಪರಿಮಾಣದಲ್ಲಿ ಕಫವರ್ಧಕವಾಗಿಯೂ (ಎಕ್ಸ್‍ಪೆಕ್ಟೊರೆಂಟ್) ಅಧಿಕ ಪರಿಮಾಣದಲ್ಲಿ ವಮನಕಾರಕವಾಗಿಯೂ (ಎಮೆಟಿಕ್) ಇದರ ಗುಣವಿದೆ. ಆದರೆ ಎಂಟಮೀಬ ಹಿಸ್ಟೊಲಿಟಿಕ ಜೀವಿಯಿಂದ ಸಂಭವಿಸುವ ಆಮಶಂಕೆ ಮತ್ತು ಯಕೃತ್ತಿನ ಹುಣ್ಣುಗಳ ನಿವಾರಣೆಗಾಗಿ ಇದರ ಉಪಯೋಗ ಇದೆಲ್ಲಕ್ಕಿಂತ ಮುಖ್ಯವಾದುದು. ವಮನಕಾರಕವಾಗಿ ಕೆಲಸಮಾಡುವಾಗ ನೇರವಾಗಿ ಜಠರದ ಮೇಲೆ ಅಲ್ಲದೆ ಕೇಂದ್ರನರವ್ಯೂಹದ ಮೇಲೂ ಇದರ ಪ್ರಭಾವವಿದೆ. ಸೂಜಿಮದ್ದಾಗಿ ಉಪಯೋಗಿಸುವಾಗ ಎಮೆಟಿನ್ ಹೈಡ್ರೋಕ್ಲೋರೈಡನ್ನೂ ಹೊಟ್ಟೆಗೆ ಕೊಡುವಾಗ ಎಮೆಟಿನ್ ಬಿಸ್ಮತ್ ಅಯೊಡೈಡನ್ನು ಬಳಸುತ್ತಾರೆ. ಇದನ್ನು ಕೃತಕವಾಗಿ ಸಂಶ್ಲೇಷಿಸಲಾಗಿದೆ. 
						
	(ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ